Monday, 24 October 2011

ಪುಷ್ಪಾ ಕೊಲೆ ಪ್ರಕರಣ: "ಕೊಡಗು ವಾರ್ತೆ" ಸುದ್ದಿಯ ಎಫೆಕ್ಟ್

ಪತಿ ನಾರಾಯಣ ಸ್ವಾಮಿ  ಮಂಪರು ಪರೀಕ್ಷೆಗೆ ಒತ್ತಾಯ: ಪ್ರಕರಣದ ನೈಜಾಂಶದ ಬಯಲಿಗೆ 15 ದಿನಗಳ ಗಡುವು 
ಗೋಣಿಕೊಪ್ಪಲು ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿ ಎದುರು ಪ್ರತಿಭಟನೆ
 ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾಗಿದ್ದ ಹಿರಿಯ ವಿಜ್ಞಾನಿ ಡಾ. ಬಿ. ನಾರಾಯಣ ಸ್ವಾಮಿ ಅವರ ಪತ್ನಿ ಪುಷ್ಪಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೈಜ ಕೊಲೆ ಆರೋಪಿಯನ್ನು ಕೂಡಲೇ ಬಂಧಿಸಬೇಕು ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಶನಿವಾರ (ಅಕ್ಟೋಬರ್ 22) ಗೋಣಿಕೊಪ್ಪಲು ಪಟ್ಟಣದಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ವೀರಾಜಪೇಟೆ ತಾಲೂಕು ಯುವ ಒಕ್ಕೂಟ ಹಾಗೂ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಟ್ಟಣದ ಪಾಲಿಬೆಟ್ಟ ರಸ್ತೆಯಿಂದ ಪೊಲೀಸ್ ಠಾಣೆಯವರೆಗೆ ನೈಜ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಾಕಾರರು ಭ್ರಷ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಸಿಬಿಐ ತನಿಖೆಗೆ ಒತ್ತಾಯಿಸಿದರು. ಬಳಿಕ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಗೆ ತೆರಳಿ ಪ್ರಕರಣವನ್ನು ಬಯಲಿಗೆಳೆಯಲು ಒತ್ತಾಯಿಸಿ ವೀರಾಜಪೇಟೆ ಸರ್ಕಲ್ ಇನ್ಸ್ ಪೆಕ್ಟರ್ (ಗೋಣಿಕೊಪ್ಪಲು ಪ್ರಭಾರ) ಗಂಗಾಧರಯ್ಯ ಸ್ವಾಮಿ ಅವರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮಂಗಲ ಮಹಿಳಾ ಮಂಡಳಿ ಅಧ್ಯಕ್ಷೆ ಶೈಲಾ ಸುಬ್ರಮಣಿ, ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಡಿವೈಎಸ್ಪಿ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಪುಷ್ಪಾ ಕೊಲೆಯ ಪ್ರಕರಣದಲ್ಲಿ ನೈಜ ಆರೋಪಿಯನ್ನು ಬಂಧಿಸದೆ ಅಮಾಯಕನನ್ನು ಬಂಧಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಶ್ರೀಮಂಗಲ ಭಾಗದಲ್ಲಿ ಕಾನೂನು ವ್ಯವಸ್ಥೆ ತೀವ್ರ ಹಾಳಾಗಿದೆ. ಅಲ್ಲಿನ ಮಂಜುನಾಥ ಹಾಗೂ ಯೋಗೇಶ್ ಎಂಬ ಪೊಲೀಸ್ 100 ರೂಪಾಯಿಗೂ ಕೈ ಚಾಚುತ್ತಿದ್ದಾರೆ.ಈ ಬಗ್ಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.   
ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ಜಿನ್ನು ನಾಣಯ್ಯ  ಮಾತನಾಡಿ, ಕೊಲೆಯಾದ ಪುಷ್ಪಾಳ ಪತಿ ನಾರಾಯಣ ಸ್ವಾಮಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ನೈಜಾಂಶ ಬಯಲಿಗೆ ಬರುತ್ತದೆ. ಕೊಲೆ ಪ್ರಕರಣ ಮುಂದಿಟ್ಟುಕೊಂಡು ನಾರಾಯಣ ಸ್ವಾಮಿ ಕೊಡಗಿನ ಜನರನ್ನೇ ದೂರುತ್ತಿದ್ದಾರೆ. ಈಗ ಬಂಧಿಸಲಾಗಿರುವ ಅಮಾಯಕ ಮಹೇಶನ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೆ ನಿಜವಾದ ಆರೋಪಿಯ ಬಂಧನಕ್ಕೆ ಮುಂದಾಗಲಿ ಎಂದು ಒತ್ತಾಯಿಸಿದರು. 15 ದಿನಗಳ ಒಳಗೆ ನೈಜ ಕೊಲೆಗಾರರನ್ನು ಬಂಧಿಸದೆ ಇದ್ದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಯುವ ಒಕ್ಕೂಟದ ಅಧ್ಯಕ್ಷ ಗುರುರಾಜ್ ರಾವ್ ಮಾತನಾಡಿ, ಪ್ರತಿಭಟನೆಗೆ ನಾರಾಯಣ ಸ್ವಾಮಿ ಅವರ ಸಹಕಾರವೂ ಅಗತ್ಯವಿತ್ತು. ಪ್ರತಿಭಟನೆಗೆ ಆಹ್ವಾನಿಸಲು ದೂರವಾಣಿ ಕರೆ ಮಾಡಿದರೆ ಸ್ವಿಚ್ ಆಫ್ ಆಗಿದೆ. ಅವರು ಆರೋಪಿಯಾಗದೆ ಇದ್ದರೆ ಪ್ರಕರಣವನ್ನು ಬಯಲಿಗೆಳೆಯಲು ಅಥವಾ ಆರೋಪಿಯ ಬಂಧನಕ್ಕೆ ಅವರೇ ಒತ್ತಾಯಿಸುತ್ತಿದ್ದರು. ಯಾವುದೇ ಪ್ರತಿಭಟನೆಗೂ ಸ್ಪಂದಿಸುತ್ತಿಲ್ಲ. ಇದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ ಹಾಜರಿದ್ದು, ಸಂಸದರ ಪರವಾಗಿ ಮನವಿ ಸ್ವೀಕರಿಸಿ ಮಾತನಾಡಿ, ಈ ಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಗೊಂದಲ ಮೂಡಿದೆ. ಪೊಲೀಸರ ಬಗ್ಗೆ ವಿಶ್ವಾಸವಿಲ್ಲದಂತಾಗಿದ್ದು, ಅನಾವಶ್ಯಕ ಸಂಶಯಗಳಿಗೆ ಎಡೆ ಮಾಡಿದೆ. ಇದರ ಸತ್ಯಾಂಶವನ್ನು ಕಂಡು ಹಿಡಿಯುವ ಮೂಲಕ ಸಂಶಯವನ್ನು ನಿವಾರಿಸಬೇಕು ಎಂದು ಹೇಳಿದರು.
ಗ್ರಾ.ಪಂ. ಉಪಾಧ್ಯಕ್ಷೆ ಬೋಜಮ್ಮ ಮಾತನಾಡಿ, ಈಗಾಗಲೇ ಬಂಧಿತನಾಗಿರುವ ಆರೋಪಿ ಮಹೇಶ್ "ನಾನು ನಿರಪರಾಧಿ" ಎಂದು ಪತ್ರ ಬರೆದು ತನ್ನ ನೋವನ್ನು ತೋಡಿಕೊಂಡಿದ್ದಾರೆ. ಈ ಎಲ್ಲಾ ಘಟನೆಗಳನ್ನು ಗಮನಿಸಿದಾಗ ಮತ್ತೊಮ್ಮೆ ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಈಗಾಗಲೇ ಬಂಧಿತನಾಗಿರುವ ಮಹೇಶ್ ನನ್ನ ಬಳಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆತ ಜುಲೈ 26 ರಂದು ಬೆಳಗ್ಗೆ 8.30 ರಿಂದ ಸಂಜೆ 4.30ರವರೆಗೆ ತನ್ನ ಬಳಿಯಲ್ಲಿಯೇ ಇದ್ದು ತನ್ನೊಂದಿಗೆ ಉಪಹಾರ, ಊಟ ಎಲ್ಲವನ್ನೂ ಮಾಡಿದ್ದಾನೆ. ಸಂಜೆ 4.30ರ ನಂತರ ಏನಾಯಿತೋ ಗೊತ್ತಿಲ್ಲ. ಬಳಿಕ ಜುಲೈ 27 ರಿಂದ 29ರವರೆಗೂ ಕೆಲಸ ಮಾಡಿಕೊಂಡಿದ್ದ ಎಂದು ಮೇಸ್ತ್ರಿ ಕುಂಞಿಮೋನ್, ಮಹೇಶ್ ಸಹಿ ಮಾಡಿದ ಹಾಜರಾತಿ ಪುಸ್ತಕದ ಪ್ರತಿಯನ್ನು ತೋರಿಸಿ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೀರಾಜಪೇಟೆ ನಗರ ಜಯ ಕರ್ನಾಟಕ   ಸಂಘಟನೆಯ  ಅಧ್ಯಕ್ಷ ಮಂಡೇಟಿರ ಅನಿಲ್ ಮಾತನಾಡಿ, ಈ ಹಿಂದೆ ಕೂಡ ವೀರಾಜಪೇಟೆಯ ಕಾಕೋಟುಪರಂಬು ಕೊಲೆ ಪ್ರಕರಣದಲ್ಲಿ ಆರೋಪಿಗಳೊಂದಿಗೆ ಶಾಮೀಲಾದ ಸರ್ಕಲ್ ಇನ್ಸ್ ಪೆಕ್ಟರ್ ಶೈಲೇಂದ್ರ ನೈಜ ಆರೋಪಿಯನ್ನು ಬಂಧಿಸುವಲ್ಲಿ ಹಿಂದೇಟು ಹಾಕಿದ್ದರು. ಆನಂತರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಆರಂಭಗೊಳ್ಳುತ್ತಿದ್ದಂತೆ ಆರೋಪಿ ಗಳನ್ನು ಬಂಧಿಸಿದರು. ಇದೀಗಲೂ ಕೂಡ ಆರೋಪಿಗಳೊಂದಿಗೆ ಇವರು ಶಾಮೀಲಾಗಿದ್ದಾರೆ. ಪ್ರತಿಭಟನೆ ನಡೆಸಲು ಅನುಮತಿ ಪತ್ರ ಪಡೆಯಲು ಮನವಿ  ನೀಡಲಾಗಿತ್ತು. ಆದರೆ ಹಿಂದಿನ ದಿನವೇ ರಜೆಯಲ್ಲಿ ತೆರಳಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ತಪ್ಪು ಮಾಡಿಲ್ಲ ಎಂದರೆ ಪ್ರತಿಭಟನೆಗೆ ಹೆದರುವುದು ಏಕೆ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಯ ಪದಾಧಿಕಾರಿಗಳು ಮಾತನಾಡಿ, ಪ್ರಕರಣವನ್ನು ಸಿಬಿಐ ಅಥವಾ ಸಿಒಡಿ ತನಿಖೆಗೆ ಒಪ್ಪಿಸಬೇಕು. ಇದರ ಬಗ್ಗೆ 15 ದಿನಗಳ ಒಳಗೆ ಕ್ರಮ ಕೈಗೊಳ್ಳದೆ ಇದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆಯ ಗೋಣಿಕೊಪ್ಪಲು ಹೋಬಳಿ ಅಧ್ಯಕ್ಷ ಸುಭಾ ಮುತ್ತಪ್ಪ, ತಾಲೂಕು ಯುವ ಒಕ್ಕೂಟದ ಕಾರ್ಯದರ್ಶಿ ಸಣ್ಣುವಂಡ ನಂದನು ಮುತ್ತಣ್ಣ, ಗ್ರಾ.ಪಂ. ಮಹಿಳಾ ಸದಸ್ಯರಾದ ರೀನಾ ರಾಜೀವ್,  ಪ್ರವಿ ಮೊಣ್ಣಪ್ಪ, ಚೇಂದಿರ ಪ್ರಭಾ ನಾಣಯ್ಯ, ಬೀನಾ, ಸುಮಿತ್ರಾ, ರುಕ್ಮಿಣಿ, ರಮಾವತಿ ಹಾಗೂ ಜಿಲ್ಲಾ ನೆಹರು ಯುವ ಕೇಂದ್ರ, ಸುಬ್ರಹ್ಮಣಿ ಯುವತಿ ಮಂಡಳಿ ವೀರಾಜಪೇಟೆ ಮತ್ತು ವಿವಿಧ ಸ್ತ್ರೀ ಶಕ್ತಿ, ಸ್ವ ಸಹಾಯ ಸಂಗದ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಗೋಣಿಕೊಪ್ಪಲು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ


Wednesday, 12 October 2011

ಮುಚ್ಚಿಹೋದ ಪುಷ್ಪಾ ಕೊಲೆ... ತೆರೆಯಬಹುದೆ ನ್ಯಾಯದ ಬಾಗಿಲು..?!!

ಹತ್ಯೆಗೀಡಾಗಿರುವ ಪುಷ್ಪಾ
ಕೆವಿಕೆ ಕೃಷಿ ವಿಜ್ಞಾನಿ ಡಾ. ಬಿ. ನಾರಾಯಣ ಸ್ವಾಮಿ ಪತ್ನಿ ಪುಷ್ಪಾ ಕೊಲೆ ನಡೆದು ಬರೋಬರಿ 1ªÀµÀð ಮುಗಿದಿದೆ. ಏನು ಅರಿಯದ ಮುಗ್ದೆ ಪುಷ್ಪಾ ಮಣ್ಣಲ್ಲಿ ಮಣ್ಣಾಗಿ ಹೋಗಿ ಆಕೆಯ ದೇಹ ಮಣ್ಣಿನೊಳಗೆ ವಿಲೀನವಾಗಿದೆ. ಆದರೆ ಆಕೆಯ ಆತ್ಮ ಮಾತ್ರ ಇನ್ನೂ ಮುಕ್ತಿ ದೊರಕದೆ ಅಲೆದಾಡುತ್ತಿದೆ. ತನ್ನ ದುರ್ಗತಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸಿ ಎಂದು ಪದೇ ಪದೆ ಕೇಳುತ್ತಿದೆಯಾದರೂ ಇನ್ನೂ ತನಿಖೆಯ ಬಾಗಿಲು ತೆರೆದುಕೊಂಡಿಲ್ಲ.
ಎಲ್ಲರಿಗೂ ಈಕೆಯ ಮೇಲೆ ಅನುಕಂಪ ಇದೆಯಾದರೂ ಯಾರೂ ಮುಂದೆ ಬರುತ್ತಿಲ್ಲ. ವಾರ್ತೆಯ ನೇರ ನುಡಿ ತನಿಖಾ ವರದಿಯನ್ನು ನೋಡಿ ಪ್ರತಿನಿತ್ಯ ನೂರಾರು ಕರೆಗಳು ಬರುತ್ತಿವೆ. ಸಾವಿರಾರು ಜನರು ನೇರವಾಗಿ ನಮ್ಮ ತಂಡವನ್ನು ಭೇಟಿಮಾಡಿ ವರದಿ ತುಂಬಾ ಚೆನ್ನಾಗಿತ್ತು, ನಿಜಕ್ಕೂ ಕೊಲೆಗಾರ ಆತನಲ್ಲ ಎಂದು ಬೇರೆ ಕಡೆ ಬೊಟ್ಟು ಮಾಡುತ್ತಿದ್ದಾರೆಯೇ ಹೊರತು ಈ ಕೊಲೆ ಪ್ರಕರಣ ತಾನಾಗಿಯೇ ತೆರೆದುಕೊಳ್ಳುವ ಯಾವ ಲಕ್ಷಣಗಳು ಕಾಣುತ್ತಿಲ್ಲ.
ಕೆಲವೊಂದು ಸಂಘಟನೆಗಳು ಈ ತನಿಖೆಯಲ್ಲಿ ಒಲವು ತೋರುತ್ತಿವೆಯಾದರೂ ಮತ್ತೊಮ್ಮೆ ಮಂಕಾಗಿ ಕುಳಿತಂತೆ ಕಾಣುತ್ತಿವೆ. ಹಲವಾರು ಮಹಿಳೆಯರು ಭೇಟಿ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಹಾಕಿದ ಹೆಜ್ಜೆ ಹಿಂದಕ್ಕೆ ಹಾಕಬೇಡಿ ಎನ್ನುತ್ತಿದ್ದಾರೆ ಹೊರತು ನನ್ನೊಂದಿಗೆ ಹೆಜ್ಜೆ ಹಾಕುತ್ತೇನೆ ಎಂದು ಮುಂದೆ ಬರುವ ಒಬ್ಬ ಅಣ್ಣ ಹಜಾರೆಯು ಕಾಣಿಸುತ್ತಿಲ್ಲ.
ಅದೇಕೋ ಗೊತ್ತಿಲ್ಲ, ಈ ತನಿಖೆಯನ್ನು ಇಲ್ಲಿಗೆ ಮುಗಿಸಿ ನಾನು ಬೇರೆಯವರ ತರಹ ಹಣ ಮಾಡಿಕೊಂಡು ಮದುವೆಯಾಗಿ ಹೆಂಡತಿ ಮಕ್ಕಳೊಂದಿಗೆ ತೆಪ್ಪಗೆ ಇದ್ದುಬಿಡಲೇ ಅನ್ನಿಸುತ್ತಿದೆಯಾದರೂ ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ನಿಜ, ಭ್ರಷ್ಟರ ವಿರುದ್ಧ ಹೋರಾಡು ಎಂದು ಪದೇ ಪದೆ ಕೂಗಿ ಹೇಳುತ್ತಿದೆ.
ಪುಷ್ಪಾಳ ಪತಿ ನಾರಾಯಣ ಸ್ವಾಮಿ
ವಾರ್ತೆಯ ವರದಿಗೆ ಇಷ್ಟೊಂದು ಜನ ಬೆಂಬಲವನ್ನು ನೋಡಿದಾಗ ಅನ್ಯಾಯದ ವಿರುದ್ಧ ಹೋರಾಡಬೇಕು, ಈ ಕೊಲೆಯ ರಹಸ್ಯವನ್ನು ಸಂಪೂರ್ಣ ಬಯಲು ಮಾಡಿ ಅಂತರ ಪಿಶಾಚಿಯಾಗಿ ಸುತ್ತುತ್ತಿರುವ ಪುಷ್ಪಾಳ ಆತ್ಮಕ್ಕೆ ಶಾಂತಿ ಕೊಡಬೇಕು. ಒಬ್ಬ ನಿರಪರಾಧಿಯನ್ನು ಜೈಲಿನಿಂದ ಹೊರಗೆ ತರಬೇಕು ಅನಿಸುತ್ತಿದೆ. ಒಂದಂತು ಸತ್ಯ ಈ ಕೊಲೆ ಪ್ರಕರಣ ಸರಿಯಾದ ರೀತಿಯಲ್ಲಿ ತನಿಖೆಯಾಗಿ ರಾಜಕೀಯ ಮೇಲಾಟವಾಗದೆ ಹೋದರೆ ಈ ಕೊಲೆ ಪ್ರಕರಣದ ಹಿಂದೆ ಅದೆಷ್ಟು ಅಧಿಕಾರಿಗಳು, ಪೊಲೀಸರು ಹಾಗೂ ವೈದ್ಯರು ಸೇರಿದಂತೆ ಆರೋಪಿಗಳು ಕಂಬಿ ಎಣಿಸಬೇಕಾಗುತ್ತೋ ಗೊತ್ತಿಲ್ಲ. ಸರಕಾರ ಮಾತ್ರ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ತಂಡಕ್ಕೆ ವಹಿಸಲು ಮೀನಾಮೇಷ ಎಣಿಸುತ್ತಿದೆ. ಇದರ ಹಿಂದೆ ಯಾವ ಕಾಣದ ಕೈಗಳ ಓಡಾಟ ಇದೆ ಎಂಬುದೇ ಆಶ್ಚರ್ಯದ ಸಂಗತಿ ಎನ್ನಬಹುದು.
ಕೊಡಗು ವಾರ್ತೆಯ ವರದಿಗೆ ಜಿಲ್ಲೆ ಮಾತ್ರವಲ್ಲ ಹೊರ ಜಿಲ್ಲೆಯಿಂದಲೂ ಕೂಡ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ವಾರ್ತೆ ಮುಂದಕ್ಕೆ ನಿಂತು ಪ್ರತಿಭಟನೆ ನಡೆಸಿ ನಾವು ಬರುತ್ತೇವೆ ಎಂಬ ಒತ್ತಾಯದ ಕೂಡ ಅಲ್ಲಲ್ಲಿ ಕೇಳಿ ಬಂತು. ನಿಮ್ಮಲ್ಲಿ ಒಂದು ಮಾತು, ಪ್ರತಿಭಟನೆ ಮಾಡುವುದು ಮಾಡಿಸುವುದು ವಾರ್ತೆಯ ಕಾಯಕವಲ್ಲ. ವಾರ್ತೆ ಏನಿದ್ದರೂ ಸತ್ಯಕ್ಕೆ ಕನ್ನಡಿ ಹಿಡಿದು ನಿಮಗೆ ತೋರಿಸುತ್ತಿದೆ ಅಷ್ಟೆ. ಅದರ ಬೆನ್ನುಹತ್ತುವುದು ಹಾಗೂ ತನಿಖೆ ಮಾಡಿಸುವುದು ನಿಮಗೆ ಬಿಟ್ಟದ್ದು. ನಾನಂತು ಯಾರ ಮುಲಾಜಿಗಾಗಿ ಜೀವನ ನಡೆಸುತ್ತಿಲ್ಲ. ನನಗೆ ಯಾರ ಭಯ ಭೀತಿ ಎನ್ನುವುದು ಇಲ್ಲ. ನಾ ಹಿಡಿಯುವ ಪೆನ್ನಿನ ಮೊನಚಿಗೆ ಗೊತ್ತಿರುವುದು ಒಂದೇ- ಅದು ಪತ್ರಿಕಾಧರ್ಮ ಮಾತ್ರ. ಈ ಪತ್ರಿಕಾ ಧರ್ಮವನ್ನು ಪಾಲಿಸುವಾಗ ಸ್ನೇಹಿತರು, ಸಂಬಂಧಿಕರು ಎದುರಾದರೂ ಒಂದೇ ಮಾನದಂಡ. ಈ ಕೊಲೆ ಪ್ರಕರಣದಲ್ಲಿ ನನ್ನ ಬಂಧುಗಳೇ ಇರಲಿ, ಆತ್ಮೀಯರೇ ಇರಲಿ ಸಿಕ್ಕಿ ಹಾಕಿಕೊಂಡರೆ ಅವರಿಗೆ ತಕ್ಕ ಶಿಕ್ಷೆಯಾಗಲಿ ಎನ್ನುವುದೇ ವಾರ್ತೆಯ ಉದ್ದೇಶ.
ನಿಮ್ಮ ಅಭಿಮಾನ ಹಾಗೂ ಪ್ರೀತಿಯ ಮಾತುಗಳಿಗೆ ನಾನು ಚಿರಋಣಿ. ಈ ಕೊಲೆ ಪ್ರಕರಣ ತನಿಖೆ ಆದಷ್ಟು ಬೇಗ ತೆರೆದುಕೊಂಡು ಮೃತ ಪುಷ್ಪಾಳ ಆತ್ಮಕ್ಕೆ ಶಾಂತಿ ದೊರಕಲಿ, ನಿರಪರಾಧಿ ಹೊರಗೆ ಬರಲಿ ಎನ್ನುವುದು ವಾರ್ತೆಯ ಉದ್ದೇಶ. ಕೂಡಲೇ ಈ ತನಿಖೆಯ ಬಾಗಿಲು ತೆರೆದುಕೊಳ್ಳದಿದ್ದರೆ ವಾರ್ತೆಯ ಬತ್ತಳಿಕೆಯಲ್ಲಿ ಹಲವಾರು ಬಾಣಗಳಿವೆ. ಆ ಬಾಣಗಳು ಈಗಾಗಲೇ ಸೇರಬೇಕಾದ ಜಾಗ ಸೇರಿದೆ. ನನ್ನೊಂದಿಗೆ ಓದುಗರಾದ ನೀವು ಇರುವಾಗ ನನಗ್ಯಾವ ಚಿಂತೆ ಇಲ್ಲ. ನಿಮಗ್ಯಾವ ಅಪನಂಬಿಕೆ ಬೇಡ. ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯುವುದು ವಾರ್ತೆಯ ಗುಣ ಅಲ್ಲ. ವಾರ್ತೆ  ಏನಿದ್ದರೂ ವಿಶಿಷ್ಟ ಕೊಡಗಿನ ವಿಭಿನ್ನ ಪತ್ರಿಕೆ. ಇದು ಸತ್ಯಕ್ಕೆ ಹಿಡಿದ ಕನ್ನಡಿ
ಅಮ್ಮನನ್ನು ಕಳೆದುಕೊಂಡು ತಬ್ಬಲಿಯಾದ ಮಗು


Thursday, 21 July 2011

ಗೋಣಿಕೊಪ್ಪಲಿನಲ್ಲಿ ಪತ್ರಿಕಾ ದಿನಾಚರಣೆ



ಗೋಣಿಕೊಪ್ಪಲು ಕಾಪ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಎಂ. ತಿಮ್ಮಯ್ಯ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
        ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಗೋಣಿಕೊಪ್ಪಲು ಕಾಪ್ಸ್ ವಿದ್ಯಾಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಪ್ರತಿಕಾ ದಿನಾಚರಣೆ ಸಮಾರಂಭ ನಡೆಯಿತು.

ಸಮಾರಂಭದ ಅಂಗವಾಗಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ "ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಪತ್ರಕರ್ತರ ಪಾತ್ರ' ವಿಷಯದ ಕುರಿತು ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆಗೆ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಎಂ. ತಿಮ್ಮಯ್ಯ ಚಾಲನೆ ನೀಡಿದರು. 
                               ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು.
ಸ್ಪರ್ಧೆಯಲ್ಲಿ ಗೋಣಿಕೊಪ್ಪಲು ಲಯನ್ಸ್ ಕಾಲೇಜಿನ ವಿ.ಆರ್. ಅರ್ಪಿತಾ (ಪ್ರಥಮ), ವೀರಾಜಪೇಟೆ ಕಾವೇರಿ ಕಾಲೇಜಿನ ಕೆ.ಎನ್. ಆಶಿಕ್(ದ್ವಿತೀಯ), ಗೋಣಿಕೊಪ್ಪಲು ವಿದ್ಯಾನಿಕೇತನ ಕಾಲೇಜಿನ ಅನುಪಮಾ (ತೃತೀಯ) ಬಹುಮಾನ ಪಡೆದುಕೊಂಡರು. ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ನಾರಾಯಣ ಸ್ವಾಮಿ ಹಾಗೂ ಕೊಡಗು ಜಿಲ್ಲಾ ಪರ್ತಕರ್ತರ ಸಂಘದ ಖಜಾಂಚಿ ಅಜ್ಜಮಾಡ ರಮೇಶ್ ಕುಟ್ಟಪ್ಪ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಸಂಘದ ಅಧ್ಯಕ್ಷ ಚಮ್ಮಟಿರ ಪ್ರವೀಣ್ ಉತ್ತಪ್ಪ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾಪ್ಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೊ. ಎಂ.ಡಿ. ನಂಜುಂಡ, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ. ಸಿ.ಜಿ. ಕುಶಾಲಪ್ಪ, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ನಾರಾಯಣ ಸ್ವಾಮಿ, ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ ಹಾಜರಿದ್ದರು.
ಗೋಣಿಕೊಪ್ಪಲು ಕಾಪ್ಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೊ. ಎಂ.ಡಿ. ನಂಜುಂಡ ಮಾತನಾಡಿದರು.

Sunday, 17 July 2011

ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಎಂ.ಕಾಂ. ಆರಂಭ

ಮದುವೆಯ ಮರುದಿನವೇ ಮಗುವಿಗೆ ಜನ್ಮ ನೀಡಿದ ಮಹಾತಾಯಿ...?

ಆರಕ್ಕೇರದ ಮೂರಕ್ಕಿಳಿಯದ ಅಂಗನವಾಡಿ ಕಾರ್ಯಕರ್ತೆಯರ ಬದುಕು

ದೇವರಾಣೆಗೂ ನಾನು ಕಾಸು ಕದ್ದಿಲ್ಲ ಪಪ್ಪ...?!!

"ಕೊಡಗು ವಾರ್ತೆ" ಲೋಕಾರ್ಪಣೆ

"ಕೊಡಗು ವಾರ್ತೆ" ವಾರ ಪತ್ರಿಕೆ ಮಡಿಕೇರಿಯ ಪತ್ರಿಕಾ ಭವನದಲ್ಲಿ 26 ಜುಲೈ 2010ರಂದು ಲೋಕಾರ್ಪಣೆ ಗೊಂಡಿತು. ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥ ನಾರಾಯಣ ಗೌಡ ಪತ್ರಿಕೆಯನ್ನು ಲೋಕಾರ್ಪಣೆ ಮಾಡಿದರು. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಾ.ಸೋಮೇಶ್, ಪತ್ರಿಕಾ ಭವನ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ. ರಮೇಶ್, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ನಾರಾಯಣ ಸ್ವಾಮಿ ನಾಯ್ಡು, ಪತ್ರಿಕೆ ಪ್ರಧಾನ ಸಂಪಾದಕ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಜರಿದ್ದರು.